ಉದಯಪುರ: ಭಾರತದ ರಾಜಾಸ್ತಾನ ರಾಜ್ಯದ ಒಂದು ನಗರ. ಜಿಲ್ಲೆಯ ಮುಖ್ಯ ಸ್ಥಳ. ಜನಸಂಖ್ಯೆ 389317 (2001) ಉ. ಅ. 23º 46'-25 `56' ಹಾಗೂ ಪೊ. ರೇ. 72º 50'-75º 38' ನಡುವೆ, ಜಯಪುರದ ನೈರುತ್ಯಕ್ಕೆ 340 ಕಿಮೀ. ದೂರದಲ್ಲಿ, ಆರಾವಳಿ ಶ್ರೇಣಿಯ ಬೆಟ್ಟವೊಂದರ ಕೋಡುಗಲ್ಲಿನ ಮೇಲೆ, ಸಮುದ್ರ ಮಟ್ಟದಿಂದ 750 ಮೀ. (2,469') ಎತ್ತರದಲ್ಲಿದೆ. ಸು. (1570)ರಲ್ಲಿ ಈ ನಗರಸ್ಥಾಪನೆ ಮಾಡಿದ ಮಹಾರಾಣಾ ಉದಯಸಿಂಹನಿಂದ ಇದಕ್ಕೆ ಈ ಹೆಸರು ಬಂದಿದೆ. ಪಿಚೋಡಾ ಸರೋವರದ ಪೂರ್ವ ದಂಡೆಯ ಮೇಲೆ ಆತ ಈ ನಗರವನ್ನು ಸ್ಥಾಪಿಸಿ ಸುತ್ತ ಭದ್ರವಾದ 30 ಮೀ. (100) ಎತ್ತರದ ಕೋಟೆ ಕಟ್ಟಿಸಿದ. ಇಲ್ಲಿರುವ ಅರಮನೆ ಇಡೀ ರಾಜಾಸ್ತಾನದಲ್ಲೇ ಅತ್ಯಂತ ದೊಡ್ಡದು. 1571ರಲ್ಲಿ ಕಟ್ಟಿಸಲಾದ ಈ ಅರಮನೆಯನ್ನು ಮುಂದೆ ಪದೇ ಪದೇ ವಿಸ್ತರಿಸಲಾಗಿದ್ದು ಇದು ಹಲವುಬಗೆಯ ಶಿಲ್ಪಶೈಲಿಗಳನ್ನೊಳಗೊಂಡಿದೆ. ಪಿಚೋಡಾ ಸರೋವರದಲ್ಲಿನ ಎರಡು ದ್ವೀಪಗಳೂ ಅವುಗಳ ಮೇಲೆ ಅಮೃತಶಿಲೆಯಿಂದ ನಿರ್ಮಿತವಾದ ಜಗಮಂದಿರ ಮತ್ತು ಜಗನಿವಾಸ ಅರಮನೆಗಳೂ ಇತಿಹಾಸ ಪ್ರಸಿದ್ಧ. ಮೊಗಲ್ ಚಕ್ರವರ್ತಿ ಜಹಾಂಗೀರನ ಮಗ ಷಾ ಜಹಾನ್ ತಂದೆಯ ವಿರುದ್ಧ ಬಂಡಾಯವೆದ್ದಾಗ ಈ ದ್ವೀಪಗಳಲ್ಲೊಂದರಲ್ಲಿ ವಾಸಿಸುತ್ತಿದ್ದನೆಂದು ಹೇಳಲಾಗಿದೆ. ಉದಯಪುರದ ಸುತ್ತಮುತ್ತ ಪಿಚೋಡಾದಂತೆ ಅನೇಕ ಕೃತಕ ಸರೋವರಗಳಿವೆ. ಕಾಡಿನ ನಡುವೆ ಕುಳಿತಂತಿರುವ ಈ ನಗರದಲ್ಲಿ ಉಪವನಗಳಿಗೂ ಕೊರತೆಯಿಲ್ಲ. ಭೂದೃಶ್ಯ ಉಪವನಯೋಜನೆಯ (ಲ್ಯಾಂಡ್ಸ್ಕೇಪ್ ಗಾರ್ಡನಿಂಗ್) ಭಾರತೀಯ ಪದ್ಧತಿಗೆ ಇಲ್ಲಿರುವ ಉದ್ಯಾನವೊಂದು ಉತ್ತಮ ಉದಾಹರಣೆ.
ಹಿಂದಿನ ಶತಮಾನಗಳ ಸ್ತಬ್ಧಚಿತ್ರಗಳನ್ನು ಕಾಣಬಯಸಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ಇಲ್ಲಿ ಇನ್ನೂ ಅನೇಕ ಬಗೆಯ ಆಕರ್ಷಣೆಗಳುಂಟು. ಉದಯಪುರದ ಪೂರ್ವಕ್ಕೆ ಎರಡು ಮೈಲಿ ದೂರದಲ್ಲಿ ಪುರಾತನ ನಗರವೊಂದರ ಪಳೆಯುಳಿಕೆಗಳಿವೆ. ನಗರದ ಸ್ಥಾಪಕನೇ ನಿರ್ಮಿಸಿದನೆಂದು ಹೇಳಲಾದ ಉದಯ ಸರೋವರ ಇರುವುದು 10 ಕಿಮೀ. ದೂರದಲ್ಲಿ. ನಗರದ ಉತ್ತರಕ್ಕೆ 64 ಕಿಮೀ. ದೂರದಲ್ಲಿರುವ ರಾಜ್ಸಮಂದ್ ಸರೋವರ ಇನ್ನೊಂದು ಸುಂದರ ತಾಣ. ಇದರ ಗಾರೆಯ ಏರಿಗೆ ಅಮೃತಶಿಲೆಯ ನೆಲಗಟ್ಟು; ನೀರಿನ ಸಮಾಗಮ ಬಯಸಿ ಸಾಗರದಂತಿರುವ ಹಾಲ್ಗಲ್ಲಿನ ಮೆಟ್ಟಿಲು; ಹೊಳೆಯುವ ಬಿಳಿಶಿಲೆಯಲ್ಲಿ ಕೆತ್ತಿ ನಿಲ್ಲಿಸಿದ ಚಿತ್ತಾರದ ಮೂರು ಮಂಟಪಗಳು. ಈ ಸರೋವರದ ಪಕ್ಕಕ್ಕೆ ಹೊದಿಸಿರುವ ಕಲ್ಲಿನ ಮೇಲೆ ಸಂಸ್ಕೃತ ಶಾಸನವೊಂದಿದೆ (1675). ಇದು ಭಾರತದಲ್ಲೇ ಅತ್ಯಂತ ದೊಡ್ಡದೆಂದು ಹೇಳಲಾಗಿದೆ. ಇಪ್ಪತೈದು ಚಪ್ಪಡಿಗಳ ಮೇಲೆ ಹರಿದಿರುವ ಈ ಶಾಸನಕ್ಕೆ ಮೇವಾಡದ ಇತಿಹಾಸವೇ ವಸ್ತು.

ಉದಯಪುರಕ್ಕೆ ಆಗ್ನೇಯದಲ್ಲಿ 51 ಕಿಮೀ. ದೂರದಲ್ಲಿರುವ ಢೇಬರ್ ಅಥವಾ ಜೈಸಮಂದ್ ಸರೋವರದ ವಿಸ್ತಾರ 52 ಚ.ಕಿಮೀ. ಇದಕ್ಕೆ ಕಟ್ಟಿರುವ ಕಟ್ಟೆ ಸು. 4ಕಿ.ಮೀ. ಉದ್ದ; 30 ಮೀ. ಎತ್ತರ. ಇದು ಒಂದು ಶಿಲ್ಪ ಕೌತುಕ.

ಉದಯಪುರದ ಉತ್ತರಕ್ಕೆ 22 ಕಿಮೀ. ದೂರದಲ್ಲಿರುವ ದೇವಸ್ಥಾನದಲ್ಲಿ ಮೇವಾಡದ ಅರಸರ ಮನೆದೇವರಾದ ಏಕ್ಲಿಂಗ್ಜಿಯ ದೇವಸ್ಥಾನವಿದೆ. ಇಲ್ಲಿ 8ನೆಯ ಶತಮಾನದಲ್ಲಿ ನಿರ್ಮಿಸಲಾದ ಕಟ್ಟಡದ ತಳಹದಿಯ ಮೇಲೆ 15ನೆಯ ಶತಮಾನದಲ್ಲಿ ಈಗಿನ ಕಟ್ಟಡ ನಿರ್ಮಿಸಲಾಯಿತು. ಸ್ವಲ್ಪ ದೂರದಲ್ಲೇ ಇರುವ ಇನ್ನೆರಡು ದೇಗುಲಗಳು 11ನೆಯ ಶತಮಾನದವು.
ಉದಯಪುರದಿಂದ ಉತ್ತರಕ್ಕೆ ಇನ್ನೂ ದೂರ ಸಾಗಿದರೆ ಸಿಕ್ಕುವುದೇ ನಾಥದ್ವಾರ. ಭಾರತದ ಅನೇಕ ಕಡೆಗಳಿಂದ ಯಾತ್ರಿಕರನ್ನು ಸೆಳೆಯುವ ಕೃಷ್ಣಮಂದಿರ ಇಲ್ಲಿದೆ. ಇಲ್ಲಿನ ವಿಗ್ರಹ 12ನೆಯ ಶತಮಾನದ್ದೆಂದೂ ಮುಸ್ಲಿಂ ವಿಗ್ರಹ ಭೇದಕರ ಕೈತಪ್ಪಿಸಿ 1669ರಲ್ಲಿ ಇದನ್ನು ಇಲ್ಲಿಗೆ ತರಲಾಯಿತೆಂದೂ ಹೇಳಲಾಗಿದೆ. ಇದನ್ನು ರಥದಲ್ಲಿ ಸಾಗಿಸುತ್ತಿದ್ದಾಗ ಹಾದಿಯಲ್ಲಿ ಅದರ ಚಕ್ರ ನೆಲದಲ್ಲಿ ಹೂತುಹೋಯಿತೆಂದೂ ಎಷ್ಟೇ ಪ್ರಯತ್ನಿಸಿದರೂ ಅದು ಮುಂದೆ ಹೋಗಲೇ ಇಲ್ಲವೆಂದೂ ಕಥೆಯುಂಟು. 

ಉದಯಪುರಕ್ಕೆ 66 ಕಿಮೀ ದೂರದಲ್ಲಿರುವ ಹಲ್ದಿಘಾಟ್ ಇತಿಹಾಸ ಪ್ರಸಿದ್ಧ. ಇದನ್ನು ಭಾರತದ ಥರ್ಮೊಪೈಲೇ ಎನ್ನಬಹುದು. ಪ್ರಶ.ಪು. 3ನೆಯ ಶತಮಾನದಲ್ಲಿ ಅಲ್ಲಿ ಗ್ರೀಕರು ಪರ್ಷಿಯನ್ ಸಾಮ್ರಾಜ್ಯದ ಸೈನ್ಯವನ್ನು ಶೌರ್ಯದಿಂದ ಎದುರಿಸಿದ ಹಾಗೆ ಇಲ್ಲಿ ಮಹಾರಾಣಾ ಪ್ರತಾಪನ ಸೈನಿಕರು ಸಾಮ್ರಾಟ್ ಅಕ್ಬರನ ಸೈನ್ಯವನ್ನು ಎದುರಿಸಿ ಹೋರಾಡಿದರು. ರಾಣಾನ ಕಡೆಯ ಒಬ್ಬೊಬ್ಬ ಸೈನಿಕನಿಗೂ ಅಕ್ಬರನ ಕಡೆಯ 100 ಮಂದಿ ಇದ್ದರೂ ಇವರು ಒಟ್ಟಾಗಿ ನಿಂತು ಕಾದಾಡಿ ಮಡಿದರು. ಆದರೂ ಪ್ರತಾಪ ಜಗ್ಗಲಿಲ್ಲ; ತನ್ನ ನೆಚ್ಚಿನ ಕುದುರೆಯಾದ ಚೈತಕನ ಮೇಲೆ ಕುಳಿತು ಬೆಟ್ಟಗಾಡಿಗೆ ಹೋದ; ಮರಳಿ ಬಲ ಗಳಿಸಿ ಬಂದು ಕಾದಾಡಿ ತಾನು ಕಳೆದುಕೊಂಡಿದ್ದ ನೆಲದ ಬಹು ಭಾಗವನ್ನು ಗೆದ್ದ.

ಇತಿಹಾಸದ ಸೋಲುಗೆಲವುಗಳನ್ನೂ ಗೋರಿ ಅರಮನೆಗಳನ್ನೂ ತುಂಬಿಕೊಂಡು ನಿಂತಿರುವ ಉದಯಪುರದಲ್ಲಿ ಎಲ್ಲೆಲ್ಲೂ ಹಸಿರೂ ನಡುನಡುವೆ ಅಮೃತಶಿಲೆಯೂ ಥಳಥಳಿಸುವ ಬಣ್ಣ ಗಾಜೂ ಇತಿಹಾಸದ ಪಡಿನೆಳಲನ್ನು ಹೊತ್ತು ನಿಂತಂತಿರುವ ತಿಳಿನೀರಿನ ಕಾಸಾರಗಳೂ ನಗರದ ರಮ್ಯತೆಯನ್ನು ಎತ್ತಿ ಸಾರುತ್ತಿವೆ.
ಉದಯಪುರ ಜಿಲ್ಲೆಯ ವಿಸ್ತೀರ್ಣ 17,643 ಚ.ಕಿಮೀ. ಜನಸಂಖ್ಯೆ 2632210 (2001). ಈ ಜಿಲ್ಲೆಯ ಹೆಚ್ಚು ಭಾಗ ಪರ್ವತಮಯ. ದಕ್ಷಿಣ ಭಾಗ ಕಪ್ಪು ಮಣ್ಣಿನಿಂದ ಕೂಡಿದೆ. ಆಗ್ನೇಯ-ನೈಋತ್ಯವಾಗಿ ಹಾಯುವ ಆರಾವಳಿ ಶಾಖೆಯೊಂದರಲ್ಲಿ ಅಭ್ರಕ, ಸೀಸ, ತವರ, ಮೇದಶ್ಶಿಲೆ (ಸ್ಟೀಯಟೈಟ್) ಮತ್ತು ಕಲ್ನಾರು ಇವೆ. ಮರಳು ಕಲ್ಲು, ಸುಣ್ಣಕಲ್ಲು ಮತ್ತು ಅಮೃತಶಿಲೆಗಳಿಗೂ ಕೊರತೆಯಿಲ್ಲ.
ಉದಯಪುರ ಜಿಲ್ಲೆ ದಕ್ಷಿಣೋತ್ತರವಾಗಿ ಇಳಿಜಾರು. ಬನಾಸ್ ನದಿಯೂ ಅದನ್ನು ಕೂಡುವ ಅನೇಕ ತೊರೆಗಳೂ ಆರಾವಳಿಯಲ್ಲಿ ಹುಟ್ಟಿ ಹರಿಯುತ್ತವೆ.(ಟಿ.ಆರ್.ಪಿ.; ಬಿ.ಕೆ.ಜಿ.)
ಇತಿಹಾಸ: ಈಗಿನ ಉದಯಪುರ ನಗರ ನಿರ್ಮಾಣವಾದದ್ದು 16ನೆಯ ಶತಮಾನದಲ್ಲಿ. 1568ರಲ್ಲಿ ಅಕ್ಬರನ ಸೇನೆಗಳಿಗೆ ಚಿತ್ತೂರು ವಶವಾದಾಗ ವಿಲಾಸಪ್ರಿಯ ಉದಯಸಿಂಹ ಅಲ್ಲಿಂದ ಹಿಮ್ಮೆಟ್ಟಿ ಬಂದು ಈ ನಗರವನ್ನು ನಿರ್ಮಿಸಿ ಇದನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡ.
ರಾಜಾ ಉದಯಸಿಂಹ ಶಿಶೋಡಾ ವಂಶದವನೆಂದೂ ರಜಪುತರಲ್ಲಿ ಇದು ಶ್ರೇಷ್ಠ ಮನೆತನವೆಂದೂ ಹೇಳಲಾಗಿದೆ. ಈ ರಜಪುತ ಕುಟುಂಬದವರು ಮುಸ್ಲಿಂ ಅರಸರಿಗೆ ಶರಣಾಗತರಾಗದೆ, ಆಶೆ-ಆಮಿಷಗಳಿಗೆ ತಲೆಬಾಗದೆ, ರಕ್ತಸಂಬಂಧ ಬೆಳೆಯಿಸದೆ ಉಳಿಯುವ ಉದ್ದೇಶ ಹೊಂದಿ ಅಭಿಮಾನದಿಂದ ಕಾದಿದರು. ಇವರ ಪರಂಪರೆ 144ರಲ್ಲಿ ರಾಣಾ ಕನಕಸೇನನಿಂದ ಪ್ರಾರಂಭವಾಯಿತೆಂದೂ 728ರಲ್ಲಿ ಈ ಮನೆತನದ ಬಾಪ್ಪಾ ರಾವಳ ಚಿತ್ತೂರಲ್ಲಿ ಮೇವಾಡ ರಾಜ್ಯ ಸ್ಥಾಪಿಸಿಕೊಂಡು ಪ್ರಭಾವಶಾಲಿಯಾಗಿದ್ದನೆಂದೂ ಈ ದೇಶಕ್ಕೆ ಮೊಟ್ಟಮೊದಲು ಬಂದ ಮುಸ್ಲಿಂ ಆಕ್ರಮಣಕಾರರನ್ನು ಈತ ಎದುರಿಸಿ ಹಿಮ್ಮೆಟ್ಟಿಸಿದನೆಂದೂ ಹೇಳಲಾಗಿದೆ. ಮುಂದೆ ಇಲ್ಲಿನ ಅರಸರು ಉದ್ದಕ್ಕೂ ಮುಸ್ಲಿಂ ಆಡಳಿತವನ್ನೆದುರಿಸಿ ಕಾದುತ್ತಲೇ ಇದ್ದರು.
ಉದಯಪುರ ನಗರ ಅನೇಕ ರಾಜಕೀಯ ದಾಳಿಗಳಿಗೆ ತುತ್ತಾಗುತ್ತಲೇ ಬಂತು. ಮೊಗಲ ಸಾಮ್ರಾಟರ ದಾಳಿಯನ್ನು ತಪ್ಪಿಸಿಕೊಂಡು ನಿಲ್ಲುವಷ್ಟರಲ್ಲಿ 1736ರಲ್ಲಿ ಬಾಜೀರಾಯ ಪೇಷ್ವೆ ಮಹಾದಾಜಿಸಿಂಧೆ, ಹೋಳಕರ ಮುಂತಾದ ಮರಾಠರನ್ನೆದುರಿಸಬೇಕಾಯಿತು. ರಜಪುತರ ಒಗ್ಗಟ್ಟು ಹರಿಯಿತು. ಇಡೀ ಭಾರತದಲ್ಲಿ ಮೊಗಲ-ಮರಾಠ ರಾಜ್ಯಗಳು ಅಳಿದುಹೋಗಿ ಸಂಭವಿಸಿದ ಅನಾಯಕತ್ವದ ಪರಿಣಾಮವಾಗಿ ಥಗ್ಗರು (ಠಕ್ಕರು) ಮತ್ತು ಪೆಂಡಾರಿಗಳ ಹಾವಳಿ ಪಸರಿಸಿತು. ಇಲ್ಲಿನ ರಜಪುತ ಅರಸರು ದುರ್ಬಲರಾಗಿ ಬ್ರಿಟಿಷರ ಮೊರೆ ಹೊಕ್ಕರು. 1817ರಲ್ಲಿ ಇದು ಬ್ರಿಟಿಷರ ರಕ್ಷಣೆಗೆ ಒಳಪಟ್ಟಿತು. 1948ರಲ್ಲಿ ಸ್ವತಂತ್ರ್ಯ ಭಾರತದ ರಾಜಾಸ್ತಾನದಲ್ಲಿ ವಿಲೀನವಾಯಿತು.	(ಟಿ.ಆರ್.ಪಿ.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ